ಗುರುವಾರ, ಜುಲೈ 19, 2012

ಸುಭಾಷಿತಾಮೃತ 2 : subhashitamrita 2

ಸುಭಾಷಿತಾಮೃತ ೨

 
33.
ಕರಾಗ್ರೇ ವಸತೇ ಲಕ್ಷ್ಮೀಃ
ಕರಮಧ್ಯೇ ಸರಸ್ವತೀ |
ಕರಮೂಲೇ ಸ್ಥಿತಾ ಗೌರೀ
ಪ್ರಭಾತೇ ಕರದರ್ಶನಮ್ ||

(ಮುಂಜಾನೇ ಎದ್ದ ತಕ್ಷಣ ನಮ್ಮ ಹಸ್ತವನ್ನು ನೋಡಿಕೊಂಡು ಹೇಳಬೇಕಾದ ಮಂತ್ರ)
ಹಸ್ತದ ತುದಿಯಲ್ಲಿ ಲಕ್ಷ್ಮಿ, ಮಧ್ಯದಲ್ಲಿ ಸರಸ್ವತಿ, ಮೂಲದಲ್ಲಿ ಗೌರಿ ಇವರು ವಾಸಮಾಡುತ್ತಾರೆ. ಆದ್ದರಿಂದ ಪ್ರಾತಃಕಾಲದಲ್ಲಿ ಹಸ್ತವನ್ನು ಮೊದಲು ನೋಡಬೇಕು.

34.
ಸಮುದ್ರವಸನೇ ದೇವಿ
ಪರ್ವತಸ್ತನಮಂಡಲೇ |
ವಿಷ್ಣುಪತ್ನಿ ನಮಸ್ತುಭ್ಯಂ
ಪಾದಸ್ಪರ್ಶಂ ಕ್ಷಮಸ್ವ ಮೇ ||

(ಪ್ರತಿದಿನ ಬೆಳಿಗ್ಗೆ ಕಾಲನ್ನು ಹಾಸಿಗೆಯಿಂದ ನೆಲಕ್ಕೆ ಇಡುವ ಮೊದಲು ಹೇಳಬೇಕಾದ ಮಂತ್ರ)
ಹೇ ವಿಷ್ಣುಪತ್ನಿಯಾದ ಭೂಮಾತೆಯೇ ! ಸಮುದ್ರವೇ ನಿನ್ನ ವಸ್ತ್ರ. ಪರ್ವತಗಳೇ ನಿನ್ನ ಸ್ತನಗಳು. ನಿನಗೆ ನಮಸ್ಕಾರಗಳು. ನನ್ನ ಪಾದಸ್ಪರ್ಶಕ್ಕಾಗಿ ನನ್ನನ್ನು ಕ್ಷಮಿಸು.

35.
ಗಂಗೇ ಚ ಯಮುನೇ ಚೈವ
ಗೋದಾವರಿ ಸರಸ್ವತಿ |
ನರ್ಮದೇ ಸಿಂಧು ಕಾವೇರಿ
ಜಲೇಽಸ್ಮಿನ್ ಸನ್ನಿಧಿಂ ಕುರು ||

(ಪ್ರತಿದಿನ ಸ್ನಾನ ಮಾಡುವಾಗ ಹೇಳಬೇಕಾದ ಮಂತ್ರ)
ಗಂಗೆ, ಯಮುನೆ, ಗೋದಾವರಿ, ಸರಸ್ವತಿ, ನರ್ಮದೆ, ಸಿಂಧು ಮತ್ತು ಕಾವೇರಿ ಮಾತೆಯರೇ, ಈ ನೀರಿನಲ್ಲಿ ನೀವು ಬಂದು ನೆಲಸಿ ಅನುಗ್ರಹಿಸಿ.

36.
ನಡೆವುದೊಂದೇ ಭೂಮಿ
ಕುಡಿವುದೊಂದೇ ನೀರು
ಸುಡುವಗ್ನಿಯೊಂದೇ ಇರುತಿರಲು | ಕುಲಗೋತ್ರ
ನಡುವೆ ಎತ್ತಣದು - ಸರ್ವಜ್ಞ ||

ವಾಸಿಸುವ ಭೂಮಿ ಒಂದೇ. ಎಲ್ಲರೂ ಕುಡಿಯುವ ನೀರೂ ಒಂದೇ. ಸುಡುವ ಬೆಂಕಿಯೂ ಎರಡಿಲ್ಲ. ಹೀಗಿರುವಾಗ ಆ ಜಾತಿ, ಈ ಜಾತಿ ಎಂಬ ಭೇದಭಾವ ಸರಿಯಲ್ಲ.

37.
ಎಲುವಿಲ್ಲ ನಾಲಗೆಗೆ
ಬಲವಿಲ್ಲ ಬಡವಂಗೆ
ತೊಲೆಕಂಭವಿಲ್ಲ ಗಗನಕ್ಕೆ | ದೇವರಲಿ
ಕುಲಭೇದವಿಲ್ಲ - ಸರ್ವಜ್ಞ ||

ನಾಲಿಗೆಗೆ ಎಲುಬಿಲ್ಲ. ಬಡವನಿಗೆ ಶಕ್ತಿ ಇಲ್ಲ. ಆಕಾಶಕ್ಕೆ ಆಧಾರ ಕಂಭವಿಲ್ಲ. ದೇವರಿಗೆ ಆ ಕುಲ, ಈ ಕುಲ ಎಂಬ ಭೇಧವಿಲ್ಲ.

38.
ಆರಯ್ದು ನಡೆವವನು
ಆರಯ್ದು ನುಡಿವವನು
ಆರಯ್ದು ಅಡಿಯನಿಡುವವನು | ಲೋಕಕ್ಕೆ
ಆರಾಧ್ಯನಕ್ಕು - ಸರ್ವಜ್ಞ ||

ಎಚ್ಚರಿಕೆಯಿಂದ ವ್ಯವಹರಿಸುವವನು, ಆಲೋಚಿಸಿ ಮಾತನಾಡುವವನು ಮತ್ತು ಆಯ್ದು ಹೆಜ್ಜೆಯಿಡುವವನು ಲೋಕಕ್ಕೆ ಆರಾಧ್ಯನಾಗುತ್ತಾನೆ.

39.
ಆಲಸ್ಯಂ ಹಿ ಮನುಷ್ಯಾಣಾಂ
ಶರೀರಸ್ಥೋ ಮಹಾನ್ ರಿಪುಃ |
ನಾಸ್ತುದ್ಯಮ ಸಮೋ ಬಂಧುಃ
ಕೃತ್ವಾ ಯಂ ನಾವಸೀದತಿ ||

ಆಲಸ್ಯವೆಂಬುದು ಮನುಷ್ಯನ ಶರೀರರನ್ನು ಹೊಕ್ಕಿರುವ ಭಯಂಕರ ಶತ್ರು. ಯಾವುದನ್ನು ನಂಬಿ ಯಾರೂ ನಾಶವಾಗಿಲ್ಲವೋ ಅಂತಹ ಪರಿಶ್ರಮಕ್ಕೆ ಸಮನಾದ ಬಾಂಧವರೇ ಇಲ್ಲ.

40.
ಉದ್ಯಮೇನ ಹಿ ಸಿದ್ಧ್ಯಂತಿ
ಕಾರ್ಯಾಣಿ ನ ಮನೋರಥೈಃ |
ನ ಹಿ ಸುಪ್ತಸ್ಯ ಸಿಂಹಸ್ಯ
ಪ್ರವಿಶಂತಿ ಮುಖೇ ಮೃಗಾಃ ||

ಕೇವಲ ಆಸೆ ಪಟ್ಟ ಮಾತ್ರಕ್ಕೆ ಏನೂ ಆಗದು. ಪ್ರಯತ್ನಿಸಿದರೆ ಮಾತ್ರ ಕಾರ್ಯವು ಸಿದ್ಧಿಸುತ್ತದೆ. (ಆಹಾರಕ್ಕಾಗಿ ಪ್ರಯತ್ನಿಸದೇ) ಸುಮ್ಮನೆ ಮಲಗಿರುವ ಸಿಂಹದ ಬಾಯಿಗೆ ಮೃಗಗಳು ತಾವಾಗಿಯೇ ಬಂದು ಪ್ರವೇಶಿಸುವುದಿಲ್ಲ ತಾನೇ ?

41.
ಗಚ್ಛನ್ ಪಿಪೀಲಿಕೋ ಯಾತಿ
ಯೋಜನಾನಾಂ ತತೈರಪಿ |
ಅಗಚ್ಛನ್ ವೈನತೇಯೋಽಪಿ
ಪದಮೇಕಂ ನ ಗಚ್ಛತಿ ||

ಚಲಿಸುತ್ತಿದ್ದರೆ ಇರುವೆಯಾದರೂ ನೂರಾರು ಮೈಲಿ ಸಾಗಬಹುದು. ಚಲಿಸದೆ ಸುಮ್ಮನಿದ್ದರೆ ಗರುಡನೇ ಆದರೂ ಒಂದು ಹೆಜ್ಜೆಯೂ ಮುಂದೆ ಸಾಗದು.

42.
ಎನಗಿಂತ ಕಿರಿಯರಾರಿಲ್ಲ.
ಶಿವಭಕ್ತರಿಗಿಂತ ಹಿರಿಯರಾರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನ ಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿವ್ಯ ||

ನನಗಿಂತ ಕಿರಿಯರು (ಕ್ಷುದ್ರರು) ಯಾರೂ ಇಲ್ಲ. ಹಾಗೆಯೇ ಶಿವಭಕ್ತರಿಗಿಂತ ಹಿರಿಯರು (ಶ್ರೇಷ್ಠರು) ಯಾರೂ ಇಲ್ಲ (ಈ ಮಾತನ್ನು) ಹೇ ಕೂಡಲ ಸಂಗಮೇಶ್ವರ, ನಿಮ್ಮ ಪಾದಸಾಕ್ಷಿಯಾಗಿಯೂ ನನ್ನ ಮನಸ್ಸಿನ ಸಾಕ್ಷಿಯಾಗಿಯೂ ಹೇಳುತ್ತಿರುವೆ. ನನ್ನನ್ನು ನಾನು ಪರೀಕ್ಷಿಸಿಕೊಳ್ಳಲು ನನಗೆ ಇದೇ ಕಠಿಣ ಒರೆಗಲ್ಲು.

43.
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ
ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ
ಇದೇ ಕೂಡಲಸಂಗಮ ದೇವರನೊಲಿಸುವ ಪರಿ ||

ಕಳ್ಳತನ ಮಾಡದಿರು, ಹಿಂಸೆ ಮಾಡದಿರು. ಸುಳ್ಳೂ ಹೇಳದಿರು. ಕೋಪಿಸಿಕೊಳ್ಳದಿರು. ಅನ್ಯರನ್ನು ತಿರಸ್ಕರಿಸದಿರು. ತನ್ನನ್ನು ಹೊಗಳಿಕೊಳ್ಳದಿರು. ಇತರರನ್ನು ನಿಂದಿಸದಿರು. ಇದೇ ಅಂತರ್ಬಾಹ್ಯ ಶುದ್ಧಿ. ಇದೇ ದೇವರನ್ನೊಲಿಸುವ ಮಾರ್ಗ.

44.
ಪ್ರೀತಿಯ ಮಗನಾಗು
ನೀತೀಲಿ ಪ್ರಭುವಾಗು
ಖ್ಯಾತೀಲಿ ಧರ್ಮಜನಂತಾಗು | ಕಂದಯ್ಯ
ಜ್ಯೋತಿಯಾಗು ನೀ ಮನೆ ಬೆಳಗು ||

ಹೆತ್ತವರಿಗೆ ಮೆಚ್ಚಿನ ಮಗನಾಗು. ನೀತಿ ಮಾರ್ಗದಲ್ಲಿ ಮುನ್ನಡೆಯುತ್ತ ಧರ್ಮರಾಯನಂತೆ ಕೀರ್ತಿಗಳಿಸಿ, ಕುಲದೀಪಕನಾಗು.

45.
ಹತ್ತೆಡೆಯೊಳು ತೋಡಿ ಒಂದಡಿಯಷ್ಟನು
ಬರಲಿಲ್ಲ ನೀರೆನಬೇಡ |
ಒಂದೆಡೆಯೊಳು ತೋಡು ಹತ್ತಡಿಯಷ್ಟನು
ಚಿಮ್ಮುವುದುದಕವು ನೋಡಾ ||

ಹತ್ತು ಕಡೆ ಒಂದೊಂದಡಿ ಅಗೆದರೆ ಎಲ್ಲೂ ನೀರು ಬರುವುದಿಲ್ಲ. ಅದರ ಬದಲು ಒಂದೇ ಕಡೆ ಹತ್ತು ಅಡಿ ಅಗೆದರೆ ನೀರು ಸಿಗುವುದು.

46.
ಅಹಿಂಸಾ ಸತ್ಯಮಸ್ತೇಯಂ
ಶೌಚಮಿಂದ್ರಿಯನಿಗ್ರಹಃ |
ದಾನಂ ದಮೋ ದಯಾ ಕ್ಷಾಂತಿಃ
ಸರ್ವೇಷಾಂ ಧರ್ಮಸಾಧನಂ ||

ಅಹಿಂಸೆ, ಸತ್ಯ, ಕಳ್ಳತನ ಮಾದದಿರುವುದು, ನೈರ್ಮಲ್ಯ, ಇಂದ್ರಿಯನಿಗ್ರಹ, ದಾನ, ದಯೆ, ಶಿಸ್ತು, ತಾಳ್ಮೆ ಇವು ಎಲ್ಲರಿಗೂ ಧರ್ಮಸಾಧನ.

47.
ಮಾತೃವತ್ ಪರದಾರೇಷು
ಪರದ್ರವ್ಯೇಷು ಲೋಷ್ಠವತ್ |
ಆತ್ಮವತ್ ಸರ್ವಭೂತೇಷು
ಯಃ ಪಶ್ಯತಿ ಸ ಪಂಡಿತಃ ||

ಪರಸ್ತ್ರೀಯರನ್ನು ತಾಯಿಯಂತೆ, ಪರಧನವನ್ನು ಮಣ್ಣಿನ ಹೆಂಟೆಯಂತೆ, ಸರ್ವ ಜೀವಿಗಳನ್ನು ತನ್ನಂತೆಯೇ ಭಾವಿಸಿ ನಡೆವವನೇ ನಿಜವಾದ ಜ್ಞಾನಿ.

48.
ಯಥಾ ಚಿತ್ತಂ ತಥಾ ವಾಚಃ
ಯಥಾ ವಾಚಸ್ತಥಾ ಕ್ರಿಯಾಃ |
ಚಿತ್ತೇ ವಾಚಿ ಕ್ರಿಯಾಯಾಂ ಚ
ಮಹತಾಂ ಏಕರೂಪತಾ ||

ಆಲೋಚನೆಯಂತೆ ಮಾತು, ಮಾತಿನಂತೆ ನಡವಳಿಕೆ - ಮನಸ್ಸು, ಮಾತು, ನಡವಳಿಕೆಗಳಲ್ಲಿ ಮಹಾತ್ಮರು ಒಂದೇ ತೆರನಾಗಿರುತ್ತಾರೆ.

49.
ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧುಬಳಗ |
ಸತ್ಯವಾಕ್ಯಕೆ ತಪ್ಪ ನಡೆದರೆ
ಮೆಚ್ಚನಾ ಪರಮಾತ್ಮನು ||

50.
ಆವಿನದು ನೊರೆಹಾಲನೊಲ್ಲೆನು ದೇವಲೋಕದ ಸುಧೆಯನೊಲ್ಲೆನು
ದೇವಿ ನಿನ್ನಯ ನಾಮದದ್ಭುತ ರುಚಿಯನರಿತಿಹೆನು |
ಪಾವನಳೆ ನಿನ್ನಂಘ್ರಿಕಮಲದ ಸೇವೆಯದು ದೊರೆತಿಹುದು ತಾಯೇ
ಶ್ರೀವರನ ಕೃಪೆಯಿಂದ ಮತ್ತಿನ್ನೇನು ಬೇಡೆನಗೆ ||

ತಾಯಿ (ಭಾರತಮಾತೆ) ನಿನ್ನ ಹೆಸರಿನ ಅದ್ಭುತ ರುಚಿಯನ್ನರಿತ ನನಗೆ ಹಸುವಿನ (ಆವು=ಹಸು) ನೊರೆಹಾಲು, ದೇವಲೋಕದ ಅಮೃತ ಯಾವುದೂ ರುಚಿಸದು. ಭಗವಂತನ ಕೃಪೆಯಿಂದ ನಿನ್ನ ಪಾದಕಮಲಗಳ (ಅಂಘ್ರಿ=ಪಾದ) ಸೇವೆಯ ಭಾಗ್ಯ ದೊರಕಿರುವಾಗ ನನಗೆ ಬೇರೆ ಯಾವ ಭಾಗ್ಯವೂ ಬೇಡ.

51.
ಇಟ್ಟರೆ ಸಗಣಿಯಾದ, ತಟ್ಟಿದರೆ ಕುರುಳಾದೆ
ಸುಟ್ಟರೆ ನೊಸಲಿಗೆ ವಿಭೂತಿಯಾದೆ |
ತಟ್ಟದೇ ಹಾಕಿದರೆ ಮೇಲು ಗೊಬ್ಬರವಾದೆ
ನೀನಾರಿಗಾದೆಯೋ ಎಲೆ ಮಾನವಾ ?

ಗೋವು ಕೇಳುತ್ತದೆ - ನನ್ನ ಸಗಣಿಯಿಂದ ಅದೆಷ್ಟು ಪ್ರಯೋಜನ! ತಟ್ಟಿ ಬೆರಣಿ ಮಾಡಬಹುದು. ಸುಟ್ಟು ವಿಭೂತಿ ಮಾಡಿ ಹಣೆಗೆ ಹಚ್ಚಬಹುದು. ಗೊಬ್ಬರವಾಗಿಯೂ ಬಳಸಬಹುದು. ಓ ಮಾನವಾ, ನಿನ್ನಿಂದ ಏನು ಉಪಯೋಗ?

52.
ಇರಲೆನಗೆ ಕರಕನ್ನವುಣ್ಣಲು ಬರಿಯ ನೆಲವಿರಲೆನಗೆ ಮಲಗಲು
ಹರಕು ಬಟ್ಟೆಗಳೆನ್ನ ಮೈಯನು ಮುಚ್ಚಲಿರಲೆನಗೆ |
ಮುರುಕು ಗುಡಿಸಲು ಇರಲಿ ವಾಸಕೆ ಸಿರಿಯರಸ ಮತ್ತೇನ ಬೇಡೆನು
ಭರತ ಭೂಮಿಯೊಳಿರುವುದೇ ಎನಗೊಂದು ಸುಖವಿಹುದು ||

ಊಟ ಮಾಡಲು ಸೀದ ಹೋದ (ಕರಕಲಾದ) ಅನ್ನ, ಮಲಗಲು ಬರಿಯ ನೆಲ, ಮೈಯ್ಯನು ಮುಚ್ಚಲು ಹರಕಲು ಬಟ್ಟೆಗಳು, ವಾಸಿಸಲು ಮುರುಕು ಗುಡಿಸಲೇ ಇದ್ದರೂ ಭಾರತ ದೇಶದಲ್ಲಿರುವ ಅವಕಾಶ ದೊರೆತರೆ ಸಾಕು. ನಾನು ಬೇರೆ ಯಾವ ಸುಖವನ್ನೂ ಬೇಡುವುದಿಲ್ಲ.

53.
ಧರ್ಮ ಏವ ಹತೋ ಹಂತಿ
ಧರ್ಮೋ ರಕ್ಷತಿ ರಕ್ಷಿತಃ |
ತಸ್ಮಾದ್ಧರ್ಮೋ ನ ಹಂತವ್ಯಃ
ಮಾ ನೋ ಧರ್ಮೋ ಹತೋವಧೀತ್ ||

ಧರ್ಮವನ್ನು ಮೀರಿದರೆ ಅದು ನಮಗೆ ಹಾನಿಯನ್ನುಂಟುಮಾಡುತ್ತದೆ. ಧರ್ಮವನ್ನು ಆಚರಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಆದುದರಿಂದ ಧರ್ಮವನ್ನು ಮೀರಬಾರದು. ಧರ್ಮವನ್ನು ಮೀರಿ ಹಾಳಾಗುವುದು ಬೇಡ.

54.
ಆಚಾರ್ಯಾತ್ ಪಾದಮಾದತ್ತೇ
ಪಾದಂ ಶಿಷ್ಯಃ ಸ್ವಮೇಧಯಾ |
ಕಾಲೇನ್ ಪಾದಮಾದತ್ತೇ
ಪಾದಂ ಸಬ್ರಹ್ಮಚಾರಿಭಿಃ ||

ಶಿಷ್ಯನು ಆಚಾರ್ಯರಿಂದ ವಿದ್ಯೆಯ ಕಾಲು ಭಾಗವನ್ನೂ, ತನ್ನ ಬುದ್ಧಿಶಕ್ತಿಯಿಂದ ಕಾಲುಭಾಗವನ್ನೂ, ಸಹಪಾಠಿಗಳಿಂದ ಕಾಲುಭಾಗವನ್ನೂ, ಕಾಲಕ್ರಮೇಣ ಅನುಭವದಿಂದ ಕಾಳುಭಾಗವನ್ನೂ ತಿಳಿದುಕೊಳ್ಳುತ್ತಾನೆ.

55.
ಪರೋಪಕಾರಾಯ ಫಲಂತಿ ವೃಕ್ಷಾಃ
ಪರೋಪಕಾರಾಯ ದುಹಂತಿ ಗಾವಃ |
ಪರೋಪಕಾರಾಯ ಬಹಂತಿ ನದ್ಯಃ
ಪರೋಪಕಾರಾರ್ಥಮಿದಂ ಶರೀರಂ ||

ಮರಗಳು ಕೊಡುವ ಹಣ್ಣು, ದನಗಳು ಕೊಡುವ ಹಾಲು, ನದಿಗಳಲ್ಲಿ ಹರಿಯುವ ನೀರು ಬೇರೆಯವರ ಉಪಕಾರಕ್ಕಾಗಿಯೇ ಇರುವಂತೆ ಈ ಶರೀರವೂ ಪರೋಪಕಾರಕ್ಕಾಗಿಯೇ ಇರುವಂತಾಗಲಿ.

56.
ಭರತಖಂಡದ ಹಿತವೆ ಎನ್ನ ಹಿತ ಎಂದು
ಭರತಮಾತೆಯ ಮತವೆ ಎನ್ನ ಮತ ಎಂದು
ಭಾರತಾಂಬೆಯ ಸುತರೆ ಸೋದರರು ಎಂದು
ಭಾರತಾಂಬೆಯ ಮುಕ್ತಿ ಮುಕ್ತಿ ಎನಗೆಂದು ||

ಭಾರತದ ಹಿತವೇ ನನ್ನ ಹಿತ. ಭರತಮಾತೆಯ ವಿಚಾರವೇ ಎನ್ನ ವಿಚಾರ. ಆಕೆಯ ಮಕ್ಕಳೆಲ್ಲರೂ ನನ್ನ ಸೋದರರು. ಆಕೆಯ ಕಷ್ಟಗಳೆಲ್ಲ ದೂರವಾಗುವುದೇ ನನಗೆ ದೊರೆಯುವ ಮುಕ್ತಿ ಎಂಬ ಭಾವನೆಯಿಂದ ಈ ಕಾರ್ಯದಲ್ಲಿ ಮುನ್ನುಗ್ಗು.

57.
ಆತ್ಮವಚ್ಯುತವೆಂದು ಜನ್ಮಗಳು ಬಹವೆಂದು
ಮೃತ್ಯು ನಶ್ವರವೆಂದು ಭಾರತಿಗೆ ಜಯವೆಂದು |
ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ
ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ ||

ನಮಗೆ ಜನ್ಮಗಳು ಅನೇಕ. ಆತ್ಮಕ್ಕೆ ಸಾವಿಲ್ಲ. ಸಾವು ಮೃತ್ಯುವಿಗೆ, ಜಯವು ಭಾರತಿಗೆ ಎಂದು ಭಾವಿಸಿ ಮುಂದೆ ನಡೆ. ಯಾವ ಕಷ್ಟಕ್ಕೂ ಜಗ್ಗದೆ ರಾಷ್ಟ್ರಕಾರ್ಯದಲ್ಲಿ ಆತ್ಮವಿಶ್ವಾಸದಿಂದ ಮುನ್ನುಗ್ಗು.

58.
ಹೋರಾಡು ಬೀಳ್ವನ್ನಮೊಬ್ಬಂಟಿಯಾದೊಡೆ
ಧೀರಪಥವನೆ ಬೆದಕು ಸಕಲ ಸಮಯದೊಳು
ದೂರದಲ್ಲಿ ಗೊಣಗುತ್ತ ಬಾಳ್ವ ಬಾಳ್ಗೇನು ಬೆಲೆ
ಹೋರಿ ಸತ್ವವ ಮೆರೆಸು - ಮಂಕುತಿಮ್ಮ ||

ಒಬ್ಬಂಟಿಗನೇ ಆದರೂ ಬೀಳುವ ತನಕ ಹೋರಾಡು. ಯಾವಗಲೂ ದಿಟ್ಟತನದಿಂದ ಕೂಡಿದ ದಾರಿಯನ್ನೇ ಹುಡುಕು. ಗೊಣಗುಟ್ಟುತ್ತಾ ದೂರನಿಂತು ಬಾಳುವ ಜೀವನಕ್ಕೇನು ಬೆಲೆ ? ಹೋರಾಡಿ ಸಾಮರ್ಥ್ಯವನ್ನು ಪ್ರಕಟಪಡಿಸು.

60.
ಆತ್ಮಶುದ್ಧಿಯ ತರದ ಆಚಾರವೇತಕ್ಕೆ
ಭಾಂಡಶುದ್ಧಿಯು ಇರದ ಪಾಕವಲ್ತೆ
ಚಿತ್ತಶುದ್ಧಿಯು ಇರದ ಶಿವಪೂಜೆ ಏತಕ್ಕೆ
ವಿಶ್ವದಾ ಅಭಿರಾಮ ವೇಮ ಕೇಳು ||

ಆತ್ಮಕ್ಕೆ ಸಂಸ್ಕಾರ ನೀಡದ ಆಚಾರವಿಧಿಗಳು ಅಶುದ್ಧ ಪಾತ್ರೆಯಲ್ಲಿ ತಯಾರಿಸಿದ ಅಡುಗೆಯಂತೆ ವ್ಯರ್ಥ. ಹಾಗೆಯೇ ನಾವು ಮಾಡುವ ಭಗವಂತನ ಪೂಜೆಯು ಮನಃಶುದ್ಧಿಯನ್ನು ತರದಿದ್ದಲ್ಲಿ ಅದು ವ್ಯರ್ಥವೇ ಸರಿ.

ಸುಭಾಷಿತಾಮೃತ 1 : subhashitamrita 1

ಸುಭಾಷಿತಾಮೃತ ೧


1. 
ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್
ಬ್ರೂಯಾತ್ ಸತ್ಯಮಪ್ರಿಯಮ್ |
ಪ್ರಿಯಂ ನಾನೃತಂ ಬ್ರೂಯಾತ್
ಏಷ ಧರ್ಮಃ ಸನಾತನಃ ||

ಸತ್ಯವನ್ನು ಹೇಳಬೇಕು. ಪ್ರಿಯವಾದದ್ದನ್ನೇ ನುಡಿಯಬೇಕು. ಅಪ್ರಿಯವಾದ ಸತ್ಯವನ್ನು ಹೇಳಬಾರದು. ಪ್ರಿಯವೆಂದು ಸುಳ್ಳನ್ನೂ ನುಡಿಯಬಾರದು. ಇದೇ ಸನಾತನ ಧರ್ಮ.

 
2. 
ಶುಕವತ್ ಭಾಷಣಂ ಕುರ್ಯಾತ್
ಬಕವತ್ ಧ್ಯಾನಮಾಚರೇತ್ |
ಅಜವತ್ ಚರ್ವಣಂ ಕುರ್ಯಾತ್
ಗಜವತ್ ಧ್ಯಾನಮಾಚರೇತ್ ||

ಗಿಣಿಯಂತೆ ಮಧುರವಾದ ಮಾತು, ಬಕದಂತೆ ತದೇಕ ಧ್ಯಾನ, ಆಡಿನಂತೆ ಅಗಿದು ತಿನ್ನುವುದು, ಆನೆಯಂತೆ ಸ್ನಾನ ಮಾಡುವುದು ಯೋಗ್ಯವಾದುದು.


3.
ಸುಂದರೋಪಿ ಸುಶೀಲೋಪಿ
ಕುಲೀನೋಪಿ ಮಹಾಧನಃ |
ಶೋಭತೇ ನ ವಿನಾ ವಿದ್ಯಾ
ವಿದ್ಯಾ ಸರ್ವಸ್ಯ ಭೂಷಣಮ್ ||

ಸುಂದರನಾಗಿರಲಿ, ಗುಣವಂತನಾಗಿರಲಿ, ಒಳ್ಳೆಯ ವಂಶದಲ್ಲಿ ಹುಟ್ಟಿರಲಿ ಅಥವಾ ಧನಿಕನೇ ಆಗಿರಲಿ - ವಿದ್ಯೆಯಿಲ್ಲದೆ ಯಾರೂ ಶೋಭಿಸಲಾರರು. ವಿದ್ಯೆಯೇ ಎಲ್ಲರಿಗೂ ಭೂಷಣ.


4. 
ಜಲಬಿಂದು ನಿಪಾತೇನ
ಕ್ರಮಶಃ ಪೂರ್ಯತೇ ಘಟಃ |
ಸ ಹೇತುಃ ಸರ್ವ ವಿದ್ಯಾನಾಂ
ಧರ್ಮಸ್ಯ ಚ ಧನಸ್ಯ ಚ ||

ನೀರಿನ ಒಂದೊಂದೇ ಹನಿ ಬಿದ್ದರೂ ಮಡಿಕೆ ಹಂತಹಂತವಾಗಿ ತುಂಬಿಕೊಳ್ಳುತ್ತದೆ. ಈ ದೃಷ್ಟಾಂತವನ್ನು ವಿದ್ಯೆ, ಧರ್ಮ ಹಾಗೂ ಹಣದ ವಿಷಯದಲ್ಲಿ ನೆನಪಿಟ್ಟುಕೊಳ್ಳಬೇಕು.


5.
ಹಾಲಾದೆ ಕರೆದರೆ, ಮೊಸರಾದೆ ಹೆತ್ತರೆ
ಮೇಲೆ ಕೆನೆಗಡೆದರೆ ಬೆಣ್ಣೆಯಾದೆ |
ಮೇಲಾದ ತುಪ್ಪವೂ ನಾನಾದೆ ಕಾಸಿದರೆ
ನೀನಾರಿಗಾದೆಯೋ ಎಲೆ ಮಾನವಾ? ||

ಗೋವಿನ ಪ್ರಶ್ನೆ - ನನ್ನನ್ನು ಕರೆದರೆ ಹಾಲು ಸಿಗುತ್ತದೆ. ಹಾಲನ್ನು ಹೆಪ್ಪಿಟ್ಟರೆ ಮೊಸರು, ಮೊಸರನ್ನು ಕಡೆದರೆ ಬೆಣ್ಣೆ, ಬೆಣ್ಣೆಯನ್ನು ಕಾಯಿಸಿದರೆ ತುಪ್ಪ ಸಿಗುತ್ತದೆ. ನನ್ನಿಂದ ಇಷ್ಟೆಲ್ಲ ಲಾಭ ಪಡೆಯುವ ಓ ಮಾನವಾ, ನಿನ್ನಿಂದ ಏನು ಲಾಭ?


6.
ಉಳುವೆ ನಾ ಭೂಮಿಯನು, ಹೊರುವೆ ನಾ ಹೇರನ್ನು
ತುಳಿದು ಕಡ್ಡಿಯ ಕಾಳ ವಿಂಗಡಿಸುವೆ |
ಕಳಪೆಯಾಗಿಹ ನೆಲವ ನಗುವ ತೋಪನು ಮಾಳ್ಪೆ
ನೀನಾರಿಗಾದೆಯೋ ಎಲೆ ಮಾನವಾ ? ||

ಗೋವಿನ ಪ್ರಶ್ನೆ - ನಾನು ಭೂಮಿಯನ್ನು ಉಳುವೆ. ಭಾರವನ್ನು ಹೊರುವೆ. ಕಡ್ಡಿಯನ್ನು ತುಳಿದು ಧಾನ್ಯವನ್ನು ವಿಂಗಡಿಸುವೆ. ಬಂಜರು ಭೂಮಿಯನ್ನು ನಳನಳಿಸುವಂತೆ ಮಾಡುವೆ. ಓ ಮಾನವ... ನಿನ್ನಿಂದೇನು ಉಪಯೋಗ?


7.
ನನ್ನ ದೇಹದ ಬೂದಿ ಗಾಳಿಯಲಿ ತೂರಿಬಿಡಿ
ಹೋಗಿ ಬೀಳಲಿ ಬತ್ತ ಬೆಳೆಯುವಲ್ಲಿ |
ಬೂದಿ ಗೊಬ್ಬರದಿಂದ ತೆನೆಯೊಂದು ನೆಗೆದು ಬರೆ
ಧನ್ಯವಾಯಿತು ಹುಟ್ಟು ಸಾವಿನಲ್ಲಿ ||


8.
ನನ್ನ ದೇಹದ ಬೂದಿ ಹೊಳೆಯಲ್ಲಿ ಹರಿಯಬಿಡಿ
ತೇಲಿ ಬೀಳಲಿ ಮೀನ ಬಾಯಿಯಲ್ಲಿ |
ಮುಷ್ಟಿ ಬೂದಿಯ ತಿಂದು ಪುಷ್ಟವಾಗಲು ಮೀನು
ಧನ್ಯವಾಯಿತು ಹುಟ್ಟು ಸಾವಿನಲ್ಲಿ ||

9.
ಶುಭಂ ಕರೋತಿ ಕಲ್ಯಾಣಂ
ಆರೋಗ್ಯ ಧನಸಂಪದಮ್ |
ಶತ್ರು ಬುದ್ಧಿವಿನಾಶಾಯ
ಸಂಧ್ಯಾಜ್ಯೋತಿ ನಮೋಸ್ತು ತೇ ||

ಈ ಸಂಧ್ಯಾದೀಪ ಮನೆಯಲ್ಲಿ ಶುಭಪರಂಪರೆ ಹೆಚ್ಚಿಸಲಿ, ಆರೋಗ್ಯ, ಸಂಪತ್ತು, ಸೌಭಾಗ್ಯಗಳನ್ನು ಅನುಗ್ರಹಿಸಲಿ; ಯಾರ ಮೇಲೂ ಶತ್ರುಬುದ್ಧಿ ಮೂಡದಿರಲಿ.


10.
ಪಿತೃವದ್ ಗುರುವೃದ್ಧೇಷು
ಮಹಿಲಾಸು ಚ ಮಾತೃವತ್ |
ಭಾತೃವತ್ ಸ್ವವಯಸ್ಯೇಷು
ಶಿಶುಬಾಲೇಷು ಪುತ್ರವತ್ ||

ಗುರುಹಿರಿಯರನ್ನು ತಂದೆಯಂತೆ, ಮಹಿಳೆಯರನ್ನು ತಾಯಿಯಂತೆ, ಸಮಾನ ವಯಸ್ಕರನ್ನು ಸೋದರರಂತೆ, ಶಿಶು-ಕಿಶೋರರನ್ನು ಮಕ್ಕಳಂತೆ ನೋಡಬೇಕು.


11.
ನಮಂತಿ ಫಲಿತಾ ವೃಕ್ಷಾಃ
ನಮಂತಿ ಚ ಬುಧಾ ಜನಾಃ |
ಶುಷ್ಕ ಕಾಷ್ಟಾನಿ ಮೂರ್ಖಾಶ್ಚ
ಭಿದ್ಯಂತೇ ನ ನಮಂತಿ ಚ ||

ಹಣ್ಣು ಬಿಟ್ಟ ಮರಗಳು ಬಾಗುತ್ತವೆ. ವಿದ್ವಾಂಸರಾದ ಜನರು ವಿನಯದಿಂದ ಬಾಗುತ್ತಾರೆ. ಆದರೆ ಒಣ ಕಟ್ಟಿಗೆಗಳು ಬಾಗುವುದಿಲ್ಲ. ಮುರಿಯುತ್ತವೆ. ಹಾಗೆಯೇ ಮೂರ್ಖರು ನಾಶವಾದಾರೇ ಹೊರತು ಬಾಘುವುದಿಲ್ಲ.


12.
ಚಿಂತಾಯಾಶ್ಚ ಚಿತಾಯಾಶ್ಚ
ಬಿಂದುಮಾತ್ರಂ ವಿಶೇಷತಃ |
ಚಿತಾ ದಹತಿ ನಿರ್ಜೀವಂ
ಚಿಂತಾ ದಹತಿ ಜೀವನಂ ||

ಚಿಂತೆಗೂ ಚಿತೆಗೂ ಒಂದು ಸೊನ್ನೆ ಮಾತ್ರ ವ್ಯತ್ಯಾಸ. ಚಿತೆ ನಿರ್ಜೀವ ಶರೀರವನ್ನು ಸುಟ್ಟರೆ ಚಿಂತೆ ಜೀವನವನ್ನೇ ಸುಡುತ್ತದೆ.


13.
ಇತರರ ದೋಷವ ನೋಡುವ ಜನರು
ಹಾಸ್ಯವ ಗೈಯುವರಲ್ಲ |
ತಮ್ಮೊಳಗಿಹುದೈ ಸಾಸಿ ದೋಷ
ಕಾಣುವುದೇ ಇಲ್ಲ ! - ಕಬೀರಾ ||

ಅನ್ಯರ ತಪ್ಪುಗಳನ್ನು ನೋಡಿ ಗೇಲಿ ಮಾಡುವುದಕ್ಕಿಂತ ತನ್ನಲ್ಲಿನ ದೋಷಗಳನ್ನು ಗುರುತಿಸಿ ತಿದ್ದಿಕೊಳ್ಳುವುದು ಅತ್ಯಂತ ಯೋಗ್ಯವಾದುದು.


14.
ದೇವರಿಗಿಲ್ಲ ಜಾತಿಯ ಭೇದ
ಭಕುತರಿಗಂತೂ ಇಲ್ಲ |
ಜಾತಿಭೇದದ ಸುಳಿಗೆ ಸಿಲುಕಿ
ಮುಳುಗದಿರೋ ಮನುಜ - ಕಬೀರಾ ||

ಭಕ್ತಿಗೆ ದೇವರು ಒಲಿಯುತ್ತಾನೆಯೇ ಹೊರತು ಭಕ್ತನ ಜಾತಿಗಲ್ಲ. ಹೀಗಿರುವಾಗ ಜಾತಿಯ ಬಗ್ಗೆ ಅನವಶ್ಯಕ ಚಿಂತಿಸಿ ಗುದ್ದಾಡಿ ನಿನ್ನ ಜೀವನವನ್ನು ವ್ಯರ್ಥ ಮಾಡಿಕೊಳ್ಳದಿರು.


15.
ಶೀಲವಂತನೇ ಶ್ರೇಷ್ಠನು, ಸಕಲ
ರತ್ನಗಳ ಗಣಿಯು |
ಮೂಲೋಕದ ಸಿರಿಸಂಪದವೆಲ್ಲ
ಶೀಲದೊಳಗೆ ಇಹುದು - ಕಬೀರಾ ||

ಒಳ್ಳೆಯ ನಡತೆಗಿಂತ ಮಿಗಿಲಾದ ಸಂಪತ್ತು ಇನ್ನೊಂದಿಲ್ಲ. ಹೀಗಾಗಿ ಶೀಲವಂತನೇ ಆತ್ಯಂತ ಶ್ರೇಷ್ಠ ಧನಿಕ.


16.
ವೃಕ್ಷಕ್ಕಲ್ಲ ವೃಕ್ಷದ ಫಲವು
ನದಿಯ ನೀರು ನದಿಗಲ್ಲ |
ಸಂತನ ಬದುಕು ಸಂತನಿಗಲ್ಲ
ಅದು ಲೋಕದ ಹಿತಕೆ - ಕಬೀರಾ ||

ಮರ ಹಣ್ಣು ಬಿಡುವುದು, ನದಿ ಹರಿಯುವುದೂ ಪರರ ಉಪಯೋಗಕ್ಕಾಗಿಯೇ. ಅದರಂತೆಯೇ, ಮಹಾಪುರುಷರು ಲೋಕದ ಹಿತಕ್ಕೋಸ್ಕರ ಬದುಕುತ್ತಾರೆಯೇ ಹೊರತು ಸ್ವಂತಕ್ಕಲ್ಲ.


17.
ಸಾಲುವೇದಗಳೇಕೆ ಮೂಲಮಂತ್ರಳೇಕೆ
ಮೇಲುಕೀಳೆಂಬ ನುಡಿಯೇಕೆ | ತತ್ವದ
ಕೀಲನರಿದವಗೆ - ಸರ್ವಜ್ಞ ||

ಮೇಲು ಕೀಳೆಂಬ ಭಾವನೆ ಇಲ್ಲದೆ ತತ್ವದ ಮರ್ಮವನ್ನರಿತು ನಡೆಯುವವನಿಗೆ ಮಂತ್ರಗಳ ಅವಶ್ಯಕತೆ ಇಲ್ಲ.

18.
ಮಾತಿಂಗೆ ಮಾತುಗಳು
ಓತು ಸಾವಿರವುಂಟು
ಮಾತಾಡಿದಂತೆ ನಡೆವಾತ | ಜಗವನ್ನು
ಕೂತಲ್ಲೇ ಆಳ್ವ - ಸರ್ವಜ್ಞ ||

ಮಾತಿಗೆ ಮಾತು ಸೇರಿದರೆ ಸಾವಿರವಾಗುತ್ತದೆ. ಆದರೆ ಆಡಿದ ಮಾತಿನಂತೆಯೇ ಯಾರು ನಡೆಯುತ್ತಾನೋ ಅವನು ಕುಳಿತಲ್ಲಿಂದಲೇ ಜಗತ್ತನ್ನು ಗೆಲ್ಲುತ್ತಾನೆ.


19.
ವೇಷವಿದ್ದೊಡೆ ಏನು
ಭಾಷೆ ಇದ್ದೊಡೆ ಏನು
ದೋಷಗಳ ಹೇಳಿ ಫಲವೇನು | ಮನದಲಿಹ
ಆಸೆಯನು ಬಿಡದನಕ - ಸರ್ವಜ್ಞ ||

ತನ್ನ ಮನಸ್ಸಿನಲ್ಲೇ ಹುದುಗಿರುವ ದುರಾಸೆಗಳನ್ನು ಬಿಡದಿದ್ದಲ್ಲಿ ಅಂಥ ವ್ಯಕ್ತಿಯ ಸಭ್ಯ ವೇಷ, ಮಧುರ ಮಾತು, ಇತರರ ದೋಷಗಳನ್ನು ಸರಿಯಾಗಿ ವಿವರಿಸಿ ಹೇಳಬಲ್ಲ ಜ್ಞಾನ ಎಲ್ಲವೂ ವ್ಯರ್ಥ.


20.
ಆತ್ಮಾರ್ಥಂ ಜೀವಲೋಕೇಽಸ್ಮಿನ್
ಕೋ ನ ಜೀವತಿ ಮಾನವಃ |
ಪರಂ ಪರೋಪಕಾರಾರ್ಥಂ
ಯೋ ಜೀವತಿ ಸ ಜೀವತಿ ||

ಈ ಲೋಕದಲ್ಲಿ ತನಗಾಗಿ ಯಾರು ತಾನೇ ಬದುಕುವುದಿಲ್ಲ? ಆದರೆ ಪರೋಪಕಾರಕ್ಕಾಗಿ ಬದುಕುವವನದ್ದೇ ನಿಜವಾದ ಬದುಕು.


21..
ಪಿಪೀಲಿಕಾರ್ಜಿತಂ ಧಾನ್ಯಂ
ಮಕ್ಷಿಕಾ ಸಂಚಿತಂ ಮಧು |
ಲುಬ್ದೇನ ಸಂಚಿತಂ ದ್ರವ್ಯಂ
ಸಮೂಲಂ ಚ ವಿನಶ್ಯತಿ ||

ಇರುವೆಗಳು ಸಂಗ್ರಹಿಸಿದ ಧಾನ್ಯ, ದುಂಬಿಗಳು ಶೇಖರಿಸಿದ ಜೇನು, ಜಿಪುಣನು ಕೂಡಿಟ್ಟ ಹಣ - ಇವೆಲ್ಲ ಪರರ ಪಾಲಾಗುತ್ತವೆ.


22.
ಯಸ್ಯ ನಾಸ್ತಿ ಸ್ವಯಂ ಪ್ರಜ್ಞಾ
ಶಾಸ್ತ್ರಂ ತಸ್ಯ ಕರೋತಿ ಕಿಂ |
ಲೋಚನಾಭ್ಯಾಂ ವಿಹೀನಸ್ಯ
ದರ್ಪಣಃ ಕಿಂ ಕರಿಷ್ಯತಿ ||

ಸ್ವಂತ ಬುದ್ದಿ ಇಲ್ಲದವನಿಗೆ ಶಾಸ್ತ್ರಗಳಿಂದ ಏನೂ ಲಾಭವಿಲ್ಲ. ಕಣ್ಣೇ ಇಲ್ಲದವನಿಗೆ ಕನ್ನಡಿಯಿಂದೇನು ಪ್ರಯೋಜನ ?


23.
ಧನಧಾನ್ಯ ಸುಸಂಪನ್ನಂ
ಸ್ವರ್ಣರತ್ನಮಯಾಕರಮ್ |
ಸುಸಂಹಿತಂ ವಿನಾ ರಾಷ್ಟ್ರಂ
ನ ಭವೇದ್ ವಿಭವಾಸ್ಪದಮ್ ||

ಧನಧಾನ್ಯಗಳು ತುಂಬಿರಬಹುದು, ಚಿನ್ನರತ್ನಗಳೂ ಹೇರಳವಾಗಿರಬಹುದು. ಆದರೆ ಒಗ್ಗಟ್ಟೊಂದಿಲ್ಲದಿದ್ದಲ್ಲಿ, ರಾಷ್ಟ್ರವು ವೈಭವವನ್ನುಗಳಿಸಲಾರದು.

24.
ಉದ್ಯಮಂ ಸಾಹಸಂ ಧೈರ್ಯಂ
ಬುದ್ಧಿಃ ಶಕ್ತಿಃ ಪರಾಕ್ರಮಃ |
ಷಡೇತೇ ಯತ್ರ ವರ್ತಂತೇ
ತತ್ರ ದೇವಾಃ ಸಾಹಾಯಕೃತ್ ||

ಪರಿಶ್ರಮ, ಸಾಹಸ, ಧೈರ್ಯ, ಬುದ್ಧಿ, ಶಕ್ತಿ ಮತ್ತು ಪರಾಕ್ರಮ - ಈ ಆರೂ ಎಲ್ಲಿರುವವೋ ಅಲ್ಲಿ ದೇವತೆಗಳೇ ಸಹಾಯ ಮಾಡುತ್ತಾರೆ.


25.
ಬಂಗಾರದಂತಹ ನಾ ಕೊಟ್ಟ ದಿನವನು
ನೀ ಹಾಳು ಮಾಡಿದೆಯೆಂದು |
ಕೆಂಪನೆ ಮುಖ ಮಾಡಿ ನನ್ನನೆ ನೋಳ್ಪನು
ದಿನಪನು ತಾ ಪೋಗುವಂದು ||

ನಾನು ಕೊಟ್ಟ ಅಮೂಲ್ಯವಾದ ದಿನವನ್ನು ನೀನು ಹಾಳು ಮಾಡಿದೆಯಲ್ಲಾ ಎಂದು ಮುಳುಗುತ್ತಿರುವ ಸೂರ್ಯನು ಮುಖ ಕೆಂಪಗೆ ಮಾಡಿ ಸೋಮಾರಿಯನ್ನು ಗದರಿಸುತ್ತಾನೆ. (ಸಮಯ ಅಮೂಲ್ಯ. ಅದನ್ನು ವ್ಯರ್ಥ ಮಾಡದಿರು.)


26.
ನದಿಗೆದುರಿಸುತ ಹೋಗುವುದಾದರೆ
ಜೀವಂತ ಮತ್ಸ್ಯವೆ ಬೇಕು |
ಹೊನಲಿನ ದಿಕ್ಕಿಗೆ ಸಾಗುವುದಾದರೆ
ಕೊಳೆತೊಂದು ಕಸಕಡ್ಡಿ ಸಾಕು ||

ನಿರ್ಜೀವ ಕಸಕಡ್ಡಿಗಳು ಪ್ರವಾಹದ ದಿಕ್ಕಲ್ಲೇ ಕೊಚ್ಚಿ ಹೋಗುತ್ತವೆ. ಪ್ರವಾಹದ ವಿರುದ್ಧ ಈಜಾಡುವುದು ಜೀವಂತ ಮೀನುಗಳಿಂದ ಮಾತ್ರ ಸಾಧ್ಯ.


27.
ಎಲ್ಲರಿಗೊಂದೇ ಭೂತಲವೆಂದೆ
ಎಲ್ಲರಿಗೊಬ್ಬನೆ ದೇವರು ಎಂದೆ |
ಸರ್ವರಿಗೊಂದೇ ಸೂರ್ಯನ ಕಣ್ಣು
ವಿಧವಿಧ ಸಸ್ಯಕೆ ಒಂದೇ ಮಣ್ಣು ||

ಎಲ್ಲರೂ ವಾಸಿಸುವ ಭೂಮಿ ಒಂದೇ. ಸರ್ವರಿಗೂ ಭಗವಂತ ಒಬ್ಬನೇ. ಎಲ್ಲರಿಗೂ ಬೆಳಕನ್ನೀಯುವ ಸೂರ್ಯನೊಬ್ಬನೇ. ವಿವಿಧ ಸಸ್ಯಗಳಿಗೆ ಆಧಾರವಾಗಿರುವ ಮಣ್ಣು ಒಂದೇ.


28.
ಬಗೆಬಗೆಯಾದರೂ ದೇಹದ ಬಣ್ಣ
ಎಲ್ಲರ ನಗೆಯೂ ಒಂದೇ ಅಣ್ಣ |
ಏತಕೆ ಯುದ್ಧವು ಏತಕೆ ಮದ್ದು
ಒಂದೇ ಮನೆಯೊಳಗೆಲ್ಲರು ಇದ್ದು ||

ದೇಹದ ಬಣ್ಣದಲ್ಲಿ ಹಲವು ಬಗೆಗಳಿದ್ದರೂ ಎಲ್ಲರ ನಗುವೂ ಒಂದೇ. ಆದ್ದರಿಂದ ಒಂದೇ ಮನೆಯೊಳಗಿರುವ ನಮ್ಮ ನಮ್ಮೊಳಗೆ ವೈಮನಸ್ಸು ಜಗಳ ಯಾಕಾಗಿ?


29.
ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ
ಮೇರುವನು ಮರೆತಂದೆ ನಾರಕಕೆ ದಾರಿ |
ದೂರವಾದಡದೇನು ? ಕಾಲು ಕುಂಟಿರಲೇನು ?
ಊರ ನೆನಪೇ ಬಲವೋ - ಮಂಕುತಿಮ್ಮ ||

ನಿನ್ನ ನಡಿಗೆ ಭೂಮಿಯ ಮೇಲಿರಬಹುದು, ಆದರೆ ಗುರಿ ಮಾತ್ರ ಅತ್ಯುಚ್ಛವಾಗಿರಲಿ. ಹಿರಿದಾದ ಗುರಿ ಮರೆತಲ್ಲಿ ನೀನು ನಡೆವ ದಾರಿಯೇ ನಿನ್ನನ್ನು ನರಕಕ್ಕೆ ಒಯ್ಯಬಹುದು. ಎಷ್ಟೇ ದೂರವಿರಲಿ ಅಥವಾ ತನ್ನ ಕಾಲೇ ಕುಂಟಾಗಿರಲಿ, ಪಯಣಿಗನಿಗೆ ತಾನು ತಲುಪಬೇಕಾದ ಗುರಿಯ ನೆನಪೇ ಕ್ಷಣಕ್ಷಣಕ್ಕೂ ಶಕ್ತಿ ನೀಡುವಂತಹುದು.


30.
ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ
ಫಲ ಮಾಗುವಂದು ತುತ್ತೂರಿ ದನಿಯಿಲ್ಲ
ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ
ಹೊಲಿ ನಿನ್ನ ತುಟಿಗಳನು - ಮಂಕುತಿಮ್ಮ ||

ಭೂಮಿಯಿಂದ ಬೀಜ ಮೊಳೆಯುವಾಗ, ಕಾಯಿ ಮಾಗಿ ಹಣ್ಣಾಗುವಾಗ, ಸೂರ್ಯಚಂದ್ರರು ಬೆಳಗುವಾಗ ಯಾವುದೇ ಸದ್ದುಗದ್ದಲವಿಲ್ಲ (ಓ ಮನುಜ, ಪ್ರಸಿದ್ಧಿಯನ್ನು ಬಯಸದೆ) ಮೌನವಾಗಿ ಕೆಲಸ ಮಾಡು.


31.
ಘನತತ್ವವೊಂದಕ್ಕೆ ದಿನರಾತ್ರಿ ಮನಸೋತು
ನೆನೆಯದಿನ್ನೊಂದನೆಲ್ಲವ ನೀಡುತದರಾ |
ಅನುಸಂಧಿಯಲಿ ಜೀವಭಾರವನು ಮರೆಯುವುದು
ಹನುಮಂತನುಪದೇಶ - ಮಂಕುತಿಮ್ಮ ||

ಶ್ರೇಷ್ಠ ವಿಚಾರವೊಂದರಲ್ಲಿ ರುಚಿ ಕಾಣುತ್ತ, ಏಕಾಗ್ರ ಚಿತ್ತದಿಂದ ತನ್ನೆಲ್ಲ ಶಕ್ತಿ ಸಮಯಗಳನ್ನು ಸಮರ್ಪಿಸುತ್ತ, ಸದಾ ಸ್ವಂತಿಕೆಯನ್ನು ಮರೆಯುವುದೇ ಹನುಮಂತನ ಜೀವನ ಸಂದೇಶವಾಗಿದೆ.


32.
ರಾಮಚಂದ್ರನು ಜನಿಸಿ ರವಿಕುಲವ ಬೆಳಗಿದನು
ಕುರುಕುಲವ ಕೆಡಿಸಿದನು ಕುರುಪ ಜನಿಸಿ |
ಧರ್ಮಿಗೂ ಅಧರ್ಮಿಗೂ ಗತಿಯು ತಾನೀ ರೀತಿ
ವಿಶ್ವದಾ ಅಭಿರಾಮ ವೇಮ ಕೇಳು ||

ಶ್ರೀರಾಮನು ತಾನು ಹುಟ್ಟಿದ ಸೂರ್ಯವಂಶಕ್ಕೆ ಕೀರ್ತಿ ತಂದರೆ ದುರ್ಯೋಧನನು ಕುರುವಂಶದಲ್ಲಿ ಹುಟ್ಟಿ ಅದರ ಸರ್ವನಾಶಕ್ಕೆ ಕಾರಣನಾದ. ಧರ್ಮಿಗೂ ಅಧರ್ಮಿಗೂ ಇದೇ ವ್ಯತ್ಯಾಸ.